Friday 31 January 2014

ಮೌನಿ


 ಹೇಳಲಾಗದ ಎಷ್ಟೋ ಕನಸು
 ಅಳಿಯದೆ ಉಳಿದಿದೆ ನೆನಪಿನಾ ಪರದೆಯಲ್ಲಿ
 ಮರೆಯಲಾಗದ  ಎಷ್ಟೋ ನೋವು
 ಕರಗದೆ ಕುಣಿದಿದೆ ಎದೆಯಾ ಭೂಮಿಯಲ್ಲಿ
 ಬಳಿಯಿರುವ ಮರೀಚಿಕೆಯ ನದಿ ನೀನಾಗಲು
 ಬಯಸಲಿ ಹೇಗೆ ನಿನ್ನನ್ನು ಬರಡು ಆಸೆಯೊಂದಿಗೆ

 ಸಾಲುಗಟ್ಟಿ ನಿಂತವು ಸಮಮತವಿಲ್ಲದೆ
 ಗೊಂದಲಗಳ ಸಾಲು ಸೃಷ್ಟಿಸಿ ಸಂಕೋಚ
 ಮನಸ ತಟ್ಟಿ ಹೊರಟವು ಮಾತುಗಳಾಗದೆ
 ಅನಿಸಿಕೆಗಳ ಕಡಲು, ಕರಗಿಸಿ ನಂಬಿಕೆಯ ಖನಿಜ
 ಸವೆಸಲಿ ಹೇಗೆ ಹಾದಿಯನ್ನು ಒಂಟಿ ಭಾವದೊಂದಿಗೆ

 ಹುಡುಕುತ ಸೂರ್ಯನಲ್ಲಿ  ಪ್ರೀತಿಯ ಕಿರಣ
 ಸೋತೆನೆಂದು ಅನಿಸಿತು ನಿರ್ಮಲ ಜೀವನದಿ
 ಕಡಲ ದಡದಿ ಕುಳಿತು ಕಾಯುತಿರುವೆ
 ಗುರಿಯ ತಲುಪಲು, ನಿನ್ನ ವಿಶ್ವಾಸದ ಹಡಗಿಗಾಗಿ
 ಮರೆಯಲಿ ಹೇಗೆ ಪ್ರೇಮವನ್ನು ಹೊಸ ವಿರಹದೊಂದಿಗೆ
                                               -ಶಿಲ್ಪ 
 
 


 

Thursday 30 January 2014

 ಕವಿಯಾ ಮನವು
 ಮಾಡಿದೆ ಶೋಧನೆ
 ಹೊಸ ಹೊಸ
 ಬಣ್ಣ ಬೆರೆತ ಭಾವಗಳಿಗೆ

 ಪುಟಗಳಾ ಕಲೆಹಾಕಿ
 ಪದಗಳ ಬಂಧನದಿ
 ಹರಿಬಿಡಲು ಹದಮಾಡಿ
 ಸಂಗೀತ ನದಿಯೊಳಗೆ

 ನದಿಹರಿಯೆ ಕಡಲಾಗಿ
 ಎದೆಯ ಭುವಿಮೇಲೆ
 ಕಲ್ಮಶವ ತೊಳೆದು
 ಕಾರುಣ್ಯ ಜೊತೆಯಾಗಿ

 ಫಲವಿತ್ತು  ಹಸಿಭೂಮಿ
 ಉಸಿರಾಯ್ತು ನನ್ನೊಳಗೆ
 ಹಸಿರಾಯ್ತು ಹೃದಯವು
 ತಂಪಿನೊಳು ತನುವೊಳಗೆ
                        -ಶಿಲ್ಪ  
 




 



Monday 27 January 2014

ಸಾಹಿತ್ಯ ಶಿಲ್ಪ : ಜೀವನ ವೃಕ್ಷ

ಸಾಹಿತ್ಯ ಶಿಲ್ಪ : ಜೀವನ ವೃಕ್ಷ: ಆಸೆ, ಕನಸು, ಪ್ರೀತಿ, ಸ್ನೇಹ, ಸೋಲು, ಸವಾಲು, ಎಲ್ಲವೂ ಜೀವನದ ಗಿಡದಲ್ಲಿ ಅವಿಭಾಜ್ಯ ಅಂಗಗಳು  ಆಸೆ ಬೇರು,,  ಕನಸು ಕಾಂಡ,  ಸೋಲು ಒಣಗಿದ ಎಲೆ,  ಸವಾಲು ಬಿಸಿಲ ಬೇಗೆ...

ಜೀವನ ವೃಕ್ಷ

ಆಸೆ, ಕನಸು, ಪ್ರೀತಿ, ಸ್ನೇಹ, ಸೋಲು, ಸವಾಲು, ಎಲ್ಲವೂ ಜೀವನದ ಗಿಡದಲ್ಲಿ ಅವಿಭಾಜ್ಯ ಅಂಗಗಳು
 ಆಸೆ ಬೇರು,,
 ಕನಸು ಕಾಂಡ,
 ಸೋಲು ಒಣಗಿದ ಎಲೆ,
 ಸವಾಲು ಬಿಸಿಲ ಬೇಗೆ, ನೆರಳು ಮಳೆಯ ಪರೀಕ್ಷೆ,,
  ಸ್ನೇಹ, ಪ್ರೀತಿ ಹೂವು ,ಹಣ್ಣು, ಎಲೆಗಳ ಹಾಗೆ
  ಎಲ್ಲವೂ ಬೇಕು.....

 ಒಮ್ಮೊಮ್ಮೆ ಕೆಲವು ಬೇಡ ಎನಿಸುತ್ತದೆ,,, ಸೋಲೆಂಬ ಒಣ ಎಲೆ ಯಾರಿಗೆ ಬೇಕು ಹೇಳಿ ??...
 ಬೇಡವಾದರೂ ಬೇಕು ಯಾಕೆ ಗೊತ್ತಾ ?!..
 ಸೋಲೆಂಬ ಒಣ ಎಲೆ ಉದುರಿದರೆ ತಾನೇ ಗೆಲುವು ಅನ್ನೋ ಚಿಗುರೆಲೆ ಮರುಜೀವ ಪಡೆಯೋಕೆ ಸಾದ್ಯ ..
  ವಸಂತ ಮಾಸ ಬರಲು ಸಾದ್ಯ..?
 ಸವಾಲು, ಸೋಲು ಸ್ನೇಹಿತರಿದ್ದಂತೆ ಜೊತೆಗೆ ಬಂದು ಚಿತೆಯೇರುವಷ್ಟು ಸಮಸ್ಯೆ ತಂದೊಡ್ಡುತ್ತವೆ...
 ಗಿಡವೊಂದು ಬೆಳೆಯಬೇಕು ಅಂದರೆ ವಾತಾವರಣದಲ್ಲಿ ಏರುಪೇರು ಸರ್ವೆ ಸಾಮಾನ್ಯ, ಎಲ್ಲದ್ದಕ್ಕೂ ಹೊಂದಿಕೊಂಡು
 ಬೆಳೆಯಬೇಕು ಅದು ಅನಿವಾರ್ಯ ಕೂಡ, ಸವಾಲು ಕೂಡ,.. ಯಾವುದೇ ಜೀವಕ್ಕು ಜೀವನ ನೀಡುವ ಮೊದಲು
 ದೇವರು ಸವಾಲು ಎದುರಿಸುವ ಶಕ್ತಿ ತುಂಬಿಸಿಯೇ ಕಳುಹಿಸಿರುತ್ತಾನೆ .. ಅದನ್ನು ನೆನೆದರೆ ಸಾಕು..
 ಕಾರ್ಯಸ್ಥಿತಿಗೆ ತಂದು ಬೆಳೆಯಬಹುದು ಮುಂದೆ ...
 ಇನ್ನು ಪ್ರೀತಿ, ಸ್ನೇಹ, ಆಸೆ, ಕನಸು, ಸಂತೋಷ , ನೆಮ್ಮದಿ  ಬೇಡ ಅನ್ನೋ ಪ್ರಭೇದವೇ ಇಲ್ಲ..
 ಎಲ್ಲವನ್ನೂ ಗಳಿಸುವುದು ಸೋಲು ಮತ್ತು ಸವಾಲನ್ನು ಗೆದ್ದಾಗ ಮಾತ್ರ ಇಲ್ಲವಾದರೆ ಎಲ್ಲವೂ ಶೂನ್ಯ ಜಗದಲ್ಲಿ, ಜೀವನದಲ್ಲಿ
 ಪ್ರತಿ ಹಂತವೂ ವಿಸ್ಮಯ ಬೆಳವಣಿಗೆಯಲ್ಲಿ ..
 ತುಳಿದುಹಾಕುವ ಹಂತದಿಂದ ಕಡಿದುಹಾಕುವ ಕೊನೆಯೆಂಬ ಪೂರ್ಣವಿರಾಮದವರೆಗೂ.
 ಎಲ್ಲವನ್ನೂ ದಾಟಬೇಕು, ನಮ್ಮದೇ ಆದ ಧಾಟಿಯೊಡನೆ ನಂಬಿಕೆಯ ಚಾಟಿಯೊಡನೆ...
 ಬಂಧ, ಬಂಧನ ಇರಬೇಕು ವಾತಾವರಣದ ಆಗುಹೋಗುಗಳ ಜೊತೆಗೂ
 ಕೊನೆಗೆ ಪ್ರತಿಫಲ ಕಟ್ಟಿಟ್ಟ ತೃಪ್ತಿಯ ಬುತ್ತಿ.
 ಆಸೆಯ ಬೇರು ಆಳಕ್ಕೆ ಅನುಭವದ ಜೊತೆ  ಇಳಿದಷ್ಟು ಕನಸಿನ ಕಾಂಡ ಬೆಳೆಯುತ್ತಾ ಹೋಗುತ್ತದೆ...
 ನಂತರದಲ್ಲಿ ಸ್ನೇಹ ಪ್ರೀತಿ ಚಿಗುರೊಡೆಯುತ್ತವೆ...
 ಪ್ರೀತಿ ಸ್ನೇಹ ತಯಾರಿಸುವ ಜೀವಾಮೃತ ತಿಂದೇ ಜೀವನ ವೃಕ್ಷ ಬೆಳೆವುದು..
 ಆಸೆ ನೀಡುವ ಉತ್ಸಾಹವೆಂಬ ಲವಣದಿಂದ ಎಲೆ ಹೂವು ಬೆಳೆವುದು...
 ಕನಸೆಂಬುದು  ಪ್ರೀತಿ, ಸ್ನೇಹ, ಆಸೆಗಳ ರಾಯಭಾರಿ ಯಾವುದನ್ನು ಬಿಟ್ಟು ಜೀವನ ವೃಕ್ಷ ಬೆಳೆಯದು....
                                      -ಶಿಲ್ಪ 




  
  

Friday 24 January 2014


  ಅಂಕುರಿಸಿದ ಆಸೆಯ
  ನೆರಳಲ್ಲಿ ಅರಳಿದೆ
  ಹೊಸ ಕನಸಿನ ಬಳ್ಳಿ

  ಜೊತೆಜೊತೆಗೆ ಸಾಗಿದೆ
  ಬೆಳವಣಿಗೆ ಬೆರೆಯದೆ
  ಒಂದೇ ಹಾದಿಯ ಬೆಳಕಿನಲ್ಲಿ

  ಹೊಸದಾಗಿ ಏನಿದೆ
  ಬೆಳೆಯಬೇಕೆಂಬುದ ಬಿಟ್ಟು
  ಜೀವನ ಯಾತ್ರೆಯಲ್ಲಿ
   
  ಹೂವಂತೆ ನಗುಚೆಲ್ಲಿ
  ಹಣ್ಣಂತೆ ಹಣಚೆಲ್ಲಿ
  ಆಕರ್ಷಿಸುವ ಹಳೇ ಹೊಂಚಿನಲ್ಲಿ

  ಬೆಳೆದು ಕಳೆದು ಒಣಗಿ
  ಹೋಗುವ ಜೀವ ಇರದಿದ್ದರೂ
  ಇದ್ದಹಾಗೆ ಮಾಡುವ ಹಂಬಲದಲ್ಲಿ
                                -ಶಿಲ್ಪ 

     
 

     
 


      

     

  

  

Thursday 23 January 2014

ಹೂವಾಗಿಸು ಮನಸನ್ನು
ನಲ್ಮೆಯ ನಗುವಿನಿಂದ
 ಅರಳಲಿ ಆತ್ಮವಿಶ್ವಾಸ
   ಇರುಳಿನ ಬಿಳಿದೀಪದಂತೆ

 ತೆರಳಬೇಕು ಬಲುದೂರ
 ಬದುಕಿನಾ  ಬಯಲಲ್ಲಿ
 ಬರಿದಾಗದಿರಲಿ ತಿಳಿಗನಸು
  ಕಣ್ಣಿನಾ ಬಿಂದಿಗೆಯಿಂದ

 ನವಿರು  ಗಾಳಿ  ಬೀಸುತಿರಲಿ
 ನರ್ತನವ ಮಾಡುತಿರಲಿ
  ಕಲ್ಪನೆಗಳು  ಕಣ್ಣೆದುರು
  ಬಣ್ಣಗಳ ತೊಟ್ಟು ಪ್ರೀತಿಯಿಂದ
                                   -ಶಿಲ್ಪ




  

ಕದಲಿದೆ ಮನದ ಭಾವನೆ
ನೀನೆಸೆದ ನೋವಿನಾ ಕಲ್ಲಿನಿ೦ದ

ಅಸ್ತವ್ಯಸ್ತವು ಕನಸ ಕಟ್ಟುವ ಕಾಯಕ
ನೀನಿಟ್ಟ ಹೀನಾಯ ಸೋಲಿನಿ೦ದ

ಬಾಡಿತು ಹೃದಯವು
ಜೀವನದ ಹುಸಿ ನ೦ಬಿಕೆಯ ಬಿಸಿ ಕಾವಿನಿ೦ದ

ಬದಲಾಗದೆ ಈ ಕಹಿ ದಾರಿಯು
ನೀ ತೋರುವ ಬೆಳಕಿನಿ೦ದ

ಬದಲಿಸೆಯ ಈ ಕೆಟ್ಟ ಹಣೆಬರಹ
ಓ ದೇವ ನಿನ್ನ ಕರುಣೆಯಿ೦ದ
-ಶಿಲ್ಪ